ವೆನೆಜುವೆಲಾದಲ್ಲಿ ತನ್ನ ತೈಲ ಯೋಜನೆಗಳ ಕಾರ್ಯಾಚರಣೆಯನ್ನು ಮತ್ತೆ ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಸರ್ಕಾರಿ ಸ್ವಾಮ್ಯದ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC)ಗೆ ಅಮೆರಿಕದ ಅನುಮತಿ ದೊರೆತಿದೆ. ಅಮೆರಿಕದ ಖಜಾನೆ ಇಲಾಖೆಯ ವಿದೇಶಿ ಆಸ್ತಿಗಳ ನಿಯಂತ್ರಣ ಕಚೇರಿ (OFAC) ನೀಡಿರುವ ಈ ಅನುಮತಿ, ಹಲವು ವರ್ಷಗಳಿಂದ ನಿರ್ಬಂಧಗಳ ಕಾರಣದಿಂದ ಸೀಮಿತವಾಗಿದ್ದ ONGCಯ ಕಾರ್ಯಚಟುವಟಿಕೆಗಳಿಗೆ ಹೊಸ ಅವಕಾಶ ತೆರೆದಿದೆ.
ಆಗಸ್ಟ್ 16ರಂದು ಈ ಬೆಳವಣಿಗೆಯನ್ನು ಬಹಿರಂಗಪಡಿಸಲಾಗಿದ್ದು, ವೆನೆಜುವೆಲಾದಲ್ಲಿನ ಹೂಡಿಕೆಗಳಿಗೆ ಸಂಬಂಧಿಸಿದ ಪ್ರಮುಖ ಅಡಚಣೆ ಈಗ ನಿವಾರಣೆಯಾಗಿದೆ. ಇದರಿಂದ ತೈಲ ಉತ್ಪಾದನೆ ಹೆಚ್ಚಿಸುವುದು, ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವುದು ಮಾತ್ರವಲ್ಲದೆ, ಜಂಟಿ ಯೋಜನೆಗಳ ನಿರ್ವಹಣಾ ಹಕ್ಕು ಅಥವಾ ಆಪರೇಟರ್ಶಿಪ್ ಪಡೆಯುವ ಸಾಧ್ಯತೆಯೂ ಮೂಡಿದೆ.
ONGCಯ ಮೊದಲ ತ್ರೈಮಾಸಿಕ ಫಲಿತಾಂಶದ ಬಳಿಕ ನಡೆದ ಹೂಡಿಕೆದಾರರ ಸಭೆಯಲ್ಲಿ ಕಂಪನಿಯ ಹಣಕಾಸು ನಿರ್ದೇಶಕ ಅನೂಪ್ ಅಗರ್ವಾಲ್, ಈ ಹಿಂದೆ ನಿರ್ಬಂಧಗಳಿಂದ ಉಂಟಾಗಬಹುದಾದ ಅಪಾಯದ ಹಿನ್ನೆಲೆಯಲ್ಲಿ ವೆನೆಜುವೆಲಾದಲ್ಲಿನ ಕಾರ್ಯಾಚರಣೆಯನ್ನು ಸೀಮಿತಗೊಳಿಸಲಾಗಿತ್ತು. ಇದೀಗ ಆ ನಿರ್ಬಂಧ ಸಂಬಂಧಿತ ಅಪಾಯಗಳು ಹಿಂದೆ ಸರಿದಿರುವುದರಿಂದ ಯೋಜನೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯದೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
500 ಮಿಲಿಯನ್ ಡಾಲರ್ಗೂ ಹೆಚ್ಚು ಬಾಕಿ
ONGCಯ ವಿದೇಶಿ ಹೂಡಿಕೆ ಸಂಸ್ಥೆಯಾದ ONGC Videsh Ltd (OVL) ವೆನೆಜುವೆಲಾದ ಸ್ಯಾನ್ ಕ್ರಿಸ್ಟೋಬಲ್ ತೈಲ ಯೋಜನೆಯಲ್ಲಿ ಶೇ 40ರಷ್ಟು ಪಾಲು ಹೊಂದಿದೆ. ಕಾರಬೊಬೊ ಯೋಜನೆಯಲ್ಲಿ ಶೇ 11ರಷ್ಟು ಪಾಲು ಇದೆ. ಉಳಿದ ಪಾಲನ್ನು ವೆನೆಜುವೆಲಾದ ಸರ್ಕಾರಿ ತೈಲ ಸಂಸ್ಥೆ Petroleos de Venezuela S.A. (PDVSA) ಹೊಂದಿದೆ.
ಅಮೆರಿಕದ OFAC ಅನುಮತಿ ದೊರೆತಿರುವುದರಿಂದ ಈ ಯೋಜನೆಗಳಿಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳನ್ನು ನಿರ್ವಹಿಸಲು ONGCಗೆ ಹೆಚ್ಚಿನ ಅವಕಾಶ ಸಿಗಲಿದೆ. ಹಲವು ವರ್ಷಗಳಿಂದ ಪಾವತಿ ನಿರ್ಬಂಧಗಳ ಕಾರಣಕ್ಕೆ ಸಿಲುಕಿದ್ದ 500 ಮಿಲಿಯನ್ ಡಾಲರ್ಗೂ ಅಧಿಕ ಬಾಕಿ ಲಾಭಾಂಶವನ್ನು ಮರಳಿ ಪಡೆಯುವ ದಾರಿಯೂ ತೆರೆದಿದೆ.
ಇದು ಕಂಪನಿಯ ಪಾಲಿಗೆ ಕೇವಲ ಹಣಕಾಸಿನ ವಿಚಾರವಲ್ಲ. ವೆನೆಜುವೆಲಾದ ತೈಲ ಕ್ಷೇತ್ರದಲ್ಲಿ ತನ್ನ ಹೂಡಿಕೆಯನ್ನು ಮತ್ತೆ ಚುರುಕುಗೊಳಿಸಲು ONGCಗೆ ಇದು ಪ್ರಮುಖ ಅವಕಾಶವಾಗಿದೆ.
ವಿಶ್ವದಲ್ಲೇ ಅತಿ ದೊಡ್ಡ ತೈಲ ಸಂಗ್ರಹ
ವೆನೆಜುವೆಲಾ ವಿಶ್ವದಲ್ಲೇ ಅತಿ ದೊಡ್ಡ ಸಾಬೀತಾದ ಕಚ್ಚಾ ತೈಲ ಸಂಗ್ರಹವನ್ನು ಹೊಂದಿರುವ ದೇಶವಾಗಿದೆ. OPEC ಅಂದಾಜಿನ ಪ್ರಕಾರ ದೇಶದಲ್ಲಿ ಸುಮಾರು 303 ಬಿಲಿಯನ್ ಬ್ಯಾರೆಲ್ಗಳಷ್ಟು ಸಾಬೀತಾದ ಕಚ್ಚಾ ತೈಲ ಸಂಗ್ರಹವಿದೆ. ಇದು ಸೌದಿ ಅರೇಬಿಯಾದ ಸಂಗ್ರಹಕ್ಕಿಂತಲೂ ಹೆಚ್ಚಾಗಿದೆ.
ಆದರೆ ಹಲವು ವರ್ಷಗಳ ಕಾಲ ನಡೆದ ಕಡಿಮೆ ಹೂಡಿಕೆ, ಅಮೆರಿಕದ ನಿರ್ಬಂಧಗಳು ಮತ್ತು ಕಾರ್ಯಾಚರಣೆಯ ಸಮಸ್ಯೆಗಳಿಂದಾಗಿ ಈ ಸಂಪನ್ಮೂಲದ ದೊಡ್ಡ ಭಾಗ ಇನ್ನೂ ಸಮರ್ಪಕವಾಗಿ ಬಳಸಿಕೊಳ್ಳಲಾಗಿಲ್ಲ.
ONGCಯ ಸ್ಯಾನ್ ಕ್ರಿಸ್ಟೋಬಲ್ ಯೋಜನೆಯ ಉತ್ಪಾದನೆಯೂ ಇದಕ್ಕೆ ಉದಾಹರಣೆಯಾಗಿದೆ. ಅನೂಪ್ ಅಗರ್ವಾಲ್ ಅವರ ಪ್ರಕಾರ, 2025-26ರ ಹಣಕಾಸು ವರ್ಷದಲ್ಲಿ ಈ ಯೋಜನೆಯಿಂದ ಸುಮಾರು 0.265 ಮಿಲಿಯನ್ ಟನ್ ತೈಲ ಸಮಾನ ಉತ್ಪಾದನೆಯಾಗಿದೆ. ಇದು ಯೋಜನೆಯ ಒಟ್ಟು ಉತ್ಪಾದನಾ ಸಾಮರ್ಥ್ಯದ ಸುಮಾರು ಹತ್ತನೇ ಒಂದು ಭಾಗದಷ್ಟಾಗಿದೆ.
ಸ್ಯಾನ್ ಕ್ರಿಸ್ಟೋಬಲ್ ಮತ್ತು ಕಾರಬೊಬೊ ಯೋಜನೆಗಳಲ್ಲಿ ತನ್ನ ಪಾಲಿಗೆ ಸಂಬಂಧಿಸಿದಂತೆ ONGC ಈಗ ವೆನೆಜುವೆಲಾ ಸರ್ಕಾರ ಮತ್ತು ಜಂಟಿ ಉದ್ಯಮ ಪಾಲುದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಈ ಮಾತುಕತೆಗಳಿಂದ ಶೀಘ್ರದಲ್ಲೇ ಸಕಾರಾತ್ಮಕ ಬೆಳವಣಿಗೆ ನಿರೀಕ್ಷಿಸಲಾಗುತ್ತಿದೆ. ವಿಶೇಷವಾಗಿ PDVSAಯಿಂದ ಯೋಜನೆಯ ಆಪರೇಟರ್ಶಿಪ್ ಅನ್ನು ONGCಗೆ ವರ್ಗಾಯಿಸುವ ಸಾಧ್ಯತೆ ಚರ್ಚೆಯಲ್ಲಿದೆ.
ವೆನೆಜುವೆಲಾದಲ್ಲಿ ONGCಗೆ ಉತ್ತಮ ಭವಿಷ್ಯವಿದೆ ಎಂಬ ವಿಶ್ವಾಸವನ್ನು ಕಂಪನಿ ವ್ಯಕ್ತಪಡಿಸಿದೆ. ಕಡಿಮೆ ಆಳದ ಭೂಭಾಗದಲ್ಲಿರುವ ತೈಲ ಕ್ಷೇತ್ರಗಳ ಮೇಲೆ ಗಮನ ಹರಿಸುವುದು ತನ್ನ ದೇಶೀಯ ಅನುಭವಕ್ಕೆ ಹೊಂದಿಕೆಯಾಗುತ್ತದೆ ಎಂದು ಕಂಪನಿ ಹೇಳಿದೆ. ಗುಜರಾತ್ನ ಮೆಹಸಾನಾ ಮತ್ತು ಅಹಮದಾಬಾದ್ ಪ್ರದೇಶಗಳಲ್ಲಿನ ತೈಲ ಕ್ಷೇತ್ರಗಳ ನಿರ್ವಹಣೆಯಲ್ಲಿ ONGCಗೆ ಇರುವ ಅನುಭವ ಇದಕ್ಕೆ ನೆರವಾಗಬಹುದು.
ಭಾರತದ ಇಂಧನ ಭದ್ರತೆಗೆ ಅವಕಾಶ
ವೆನೆಜುವೆಲಾದ ಬೆಳವಣಿಗೆ ಭಾರತಕ್ಕೂ ಮಹತ್ವದ್ದಾಗಿದೆ. ದೇಶ ತನ್ನ ಕಚ್ಚಾ ತೈಲದ ಅಗತ್ಯದ 85 ಪ್ರತಿಶತಕ್ಕಿಂತಲೂ ಹೆಚ್ಚಿನ ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ವಿದೇಶಗಳಲ್ಲಿ ತೈಲ ಕ್ಷೇತ್ರಗಳಲ್ಲಿ ಪಾಲುದಾರಿಕೆ ಹೊಂದುವ ಮೂಲಕ ಭಾರತ ತನ್ನ ದೀರ್ಘಕಾಲೀನ ಇಂಧನ ಭದ್ರತೆಯನ್ನು ಬಲಪಡಿಸಿಕೊಳ್ಳಬಹುದು.
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆ ಮತ್ತು ಕಚ್ಚಾ ತೈಲದ ಬೆಲೆಗಳಲ್ಲಿ ಆಗುತ್ತಿರುವ ಏರಿಳಿತದ ನಡುವೆ ಭಾರತ ತನ್ನ ತೈಲ ಆಮದು ಮೂಲಗಳನ್ನು ವೈವಿಧ್ಯಗೊಳಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ವೆನೆಜುವೆಲಾದಂತಹ ದೊಡ್ಡ ತೈಲ ಸಂಪನ್ಮೂಲ ಹೊಂದಿರುವ ದೇಶದಲ್ಲಿ ONGCಯ ಚಟುವಟಿಕೆ ವಿಸ್ತರಣೆ ಮಹತ್ವ ಪಡೆದುಕೊಂಡಿದೆ.
ಆದರೆ ಅವಕಾಶದ ಜೊತೆಗೆ ಅಪಾಯಗಳೂ ಇವೆ. ವೆನೆಜುವೆಲಾದ ತೈಲ ಕ್ಷೇತ್ರದ ಮೂಲಸೌಕರ್ಯ ಹಲವು ವರ್ಷಗಳ ನಿರ್ಲಕ್ಷ್ಯದಿಂದ ಹದಗೆಟ್ಟಿದೆ. ರಾಜಕೀಯ ಅನಿಶ್ಚಿತತೆ, ಕಾರ್ಯಾಚರಣೆಯ ಸವಾಲುಗಳು ಮತ್ತು ಪರಿಸರ ಸಂಬಂಧಿತ ಹೊಣೆಗಾರಿಕೆಗಳು ಮುಂದಿನ ದಿನಗಳಲ್ಲಿ ONGCಗೆ ತೊಂದರೆ ಉಂಟುಮಾಡಬಹುದು.
ಅಮೆರಿಕದ ನಿರ್ಬಂಧ ನೀತಿಯ ಸ್ಥಿರತೆಯ ಬಗ್ಗೆಯೂ ಪ್ರಶ್ನೆಗಳಿವೆ. ವೆನೆಜುವೆಲಾ ವಿಚಾರದಲ್ಲಿ ಅಮೆರಿಕದ ನೀತಿ ಹಲವು ಬಾರಿ ಬದಲಾಗಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತೆ ನಿರ್ಬಂಧಗಳು ಜಾರಿಯಾಗುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.
ಸದ್ಯಕ್ಕೆ, ದೊರೆತಿರುವ ಅವಕಾಶವನ್ನು ಬಳಸಿಕೊಳ್ಳಲು ONGC ಸಿದ್ಧವಾಗಿದೆ. ವೆನೆಜುವೆಲಾದ ಯೋಜನೆಗಳ ಆಪರೇಟರ್ಶಿಪ್ ಪಡೆಯಲು ಸಾಧ್ಯವಾದರೆ, ಅದು ಲ್ಯಾಟಿನ್ ಅಮೆರಿಕದ ಇಂಧನ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗುರುತನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಮುಖ ಬೆಳವಣಿಗೆಯಾಗಲಿದೆ.

