ಆರೋಗ್ಯ ಸೇವಾವೃತ್ತಿಪರರು ಭಾರತದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಿ ಸೇವೆ ಸಲ್ಲಿಸುವಾಗ ಎದುರಿಸುತ್ತಿರುವ ನೋಂದಣಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೀತಿ ಆಯೋಗ ಮಹತ್ವದ ಶಿಫಾರಸು ಹೊರಡಿಸಿದೆ. ಆಗಸ್ಟ್ 16ರಂದು ಬಿಡುಗಡೆಯಾದ ‘India's Services Sector: Insights on Regulatory Regime in Professional Services’ ವರದಿಯಲ್ಲಿ, ವೈದ್ಯರು, ನರ್ಸ್ಗಳು ಮತ್ತು ಇತರ ಆರೋಗ್ಯ ಸೇವಾ ವೃತ್ತಿಪರರಿಗೆ ಅಂತಾರಾಜ್ಯ ಲೈಸೆನ್ಸ್ ಪೋರ್ಟಬಿಲಿಟಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಲಹೆ ನೀಡಲಾಗಿದೆ.
ಒಬ್ಬ ವೈದ್ಯರು ಅಥವಾ ಆರೋಗ್ಯ ವೃತ್ತಿಪರರು ಒಂದು ರಾಜ್ಯದಲ್ಲಿ ನೋಂದಣಿಯಾಗಿದ್ದರೆ, ಮತ್ತೊಂದು ರಾಜ್ಯದಲ್ಲಿ ಕೆಲಸ ಮಾಡಲು ಮತ್ತೆ ಹೊಸದಾಗಿ ನೋಂದಣಿ ಮಾಡಿಸಿಕೊಳ್ಳುವ ಅಥವಾ ತಮ್ಮ ಮೂಲ ರಾಜ್ಯದ ಕೌನ್ಸಿಲ್ನಿಂದ ಪ್ರತ್ಯೇಕವಾಗಿ ‘ನಿರಾಕ್ಷೇಪಣಾ ಪ್ರಮಾಣಪತ್ರ’ (NOC) ಪಡೆಯುವ ಅಗತ್ಯವಿರಬಾರದು.
ಪ್ರಸ್ತುತ ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರ ನೋಂದಣಿ ವ್ಯವಸ್ಥೆ ಬಹುತೇಕ ರಾಜ್ಯಗಳ ವೈದ್ಯಕೀಯ, ನರ್ಸಿಂಗ್ ಮತ್ತು ಸಂಬಂಧಿತ ಆರೋಗ್ಯ ಮಂಡಳಿಗಳ ಮೂಲಕ ನಡೆಯುತ್ತಿದೆ. ರಾಷ್ಟ್ರೀಯ ಮಟ್ಟದ ಸಂಸ್ಥೆಗಳು ನಿಯಂತ್ರಣ ಮತ್ತು ಮಾನದಂಡಗಳನ್ನು ರೂಪಿಸಿದರೂ, ರಾಜ್ಯಗಳ ನಡುವಿನ ನೋಂದಣಿಯನ್ನು ಸುಲಭಗೊಳಿಸುವ ಏಕೀಕೃತ ರಾಷ್ಟ್ರೀಯ ವ್ಯವಸ್ಥೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ.ಇದರಿಂದ ವೈದ್ಯರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಿ ಕೆಲಸ ಮಾಡಲು ಆಡಳಿತಾತ್ಮಕ ಅಡೆತಡೆಗಳನ್ನು ಎದುರಿಸಬೇಕಾಗಿದೆ.
ವರದಿಯಲ್ಲಿ ಮಹಾರಾಷ್ಟ್ರದ ಉದಾಹರಣೆಯನ್ನು ನೀಡಲಾಗಿದೆ. ಬೇರೆ ರಾಜ್ಯದಲ್ಲಿ ನೋಂದಾಯಿಸಿಕೊಂಡಿರುವ ವೈದ್ಯರು ಮಹಾರಾಷ್ಟ್ರದಲ್ಲಿ ಸೇವೆ ಸಲ್ಲಿಸಲು ಹೊಸದಾಗಿ ಅರ್ಜಿ ಸಲ್ಲಿಸುವುದರ ಜೊತೆಗೆ, ತಮ್ಮ ಮೂಲ ರಾಜ್ಯದ ವೈದ್ಯಕೀಯ ಮಂಡಳಿಯಿಂದ NOC ಪಡೆಯಬೇಕಾಗುತ್ತದೆ. ಇಂತಹ ನಿಯಮಗಳು ವೈದ್ಯರ ವೃತ್ತಿ ಬೇರೆಡೆ ಸೇವೆಸಲ್ಲಿಸಲು ಅಡ್ಡಿಯಾಗುವುದಲ್ಲದೆ, ವೈದ್ಯರ ಕೊರತೆ ಇರುವ ಪ್ರದೇಶಗಳಿಗೆ ತಜ್ಞರು ತೆರಳುವುದನ್ನೂ ಕಷ್ಟಕರವಾಗಿಸುತ್ತವೆ ಎಂದು ನೀತಿ ಆಯೋಗ ಅಭಿಪ್ರಾಯಪಟ್ಟಿದೆ. ರಾಜ್ಯಗಳ ನಡುವೆ ನೋಂದಣಿ ಸ್ವಯಂಚಾಲಿತವಾಗಿ ಗುರುತಿಸುವ ವ್ಯವಸ್ಥೆ ಜಾರಿಗೆ ಬಂದರೆ ಈ ಪ್ರಕ್ರಿಯೆಯನ್ನು ಸಾಕಷ್ಟು ಸರಳಗೊಳಿಸಬಹುದು ಎಂಬುದು ವರದಿಯ ಪ್ರಮುಖ ಸಲಹೆಯಾಗಿದೆ.
ರಾಷ್ಟ್ರೀಯ ಲೈಸೆನ್ಸ್ ರಿಜಿಸ್ಟ್ರಿ
ಈ ವ್ಯವಸ್ಥೆಗಾಗಿ ದೇಶಾದ್ಯಂತ ಆರೋಗ್ಯ ವೃತ್ತಿಪರರ ನೋಂದಣಿ ವಿವರಗಳನ್ನು ಒಳಗೊಂಡ ರಾಷ್ಟ್ರೀಯ ಲೈಸೆನ್ಸ್ ರಿಜಿಸ್ಟ್ರಿ ರೂಪಿಸುವಂತೆ ನೀತಿ ಆಯೋಗ ಶಿಫಾರಸು ಮಾಡಿದೆ.
ಅದರ ಜತೆಗೆ ವಿವಿಧ ರಾಜ್ಯಗಳ ವೈದ್ಯಕೀಯ ಮಂಡಳಿಗಳ ನಡುವೆ ಪರಸ್ಪರ ಮಾನ್ಯತಾ ಒಪ್ಪಂದಗಳು (Mutual Recognition Agreements) ಜಾರಿಗೆ ಬರಬೇಕು. ಒಂದು ರಾಜ್ಯದ ಮಂಡಳಿ ನೀಡಿರುವ ನೋಂದಣಿಯನ್ನು ಮತ್ತೊಂದು ರಾಜ್ಯವೂ ಗುರುತಿಸುವ ರೀತಿಯಲ್ಲಿ ವ್ಯವಸ್ಥೆ ರೂಪಿಸುವುದು ಇದರ ಉದ್ದೇಶವಾಗಿದೆ. ವೈದ್ಯಕೀಯ ಪದವೀಧರರ ಸಾಮರ್ಥ್ಯವನ್ನು ದೇಶಾದ್ಯಂತ ಒಂದೇ ರೀತಿಯಲ್ಲಿ ಮೌಲ್ಯಮಾಪನ ಮಾಡಲು ನ್ಯಾಷನಲ್ ಎಕ್ಸಿಟ್ ಟೆಸ್ಟ್ (NExT) ಅನ್ನು ತ್ವರಿತವಾಗಿ ಜಾರಿಗೆ ತರಬೇಕೆಂಬ ಸಲಹೆಯನ್ನೂ ವರದಿ ನೀಡಿದೆ.
ವೈದ್ಯರ ಕೊರತೆ ಇರುವ ರಾಜ್ಯಗಳ ನಡುವೆ ಭಾರತದಲ್ಲಿ ದೊಡ್ಡ ವ್ಯತ್ಯಾಸವಿದೆ. ನಗರ ಪ್ರದೇಶಗಳಲ್ಲಿ ವೈದ್ಯರ ಸಾಂದ್ರತೆ ಹೆಚ್ಚಿದ್ದರೆ, ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ತಜ್ಞ ವೈದ್ಯರ ಕೊರತೆ ಇನ್ನೂ ಮುಂದುವರಿದಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರತಿ 1,000 ಜನರಿಗೆ ಒಬ್ಬ ವೈದ್ಯರ ಅನುಪಾತವನ್ನು ಶಿಫಾರಸು ಮಾಡುತ್ತದೆ. ದೇಶದ ಒಟ್ಟಾರೆ ಸರಾಸರಿ ಇದಕ್ಕಿಂತ ಉತ್ತಮವಾಗಿದ್ದರೂ, ರಾಷ್ಟ್ರೀಯ ಸರಾಸರಿ ಮಾತ್ರ ನೋಡಿದರೆ ರಾಜ್ಯಗಳು ಮತ್ತು ಗ್ರಾಮೀಣ-ನಗರ ಪ್ರದೇಶಗಳ ನಡುವಿನ ಅಸಮಾನತೆಗಳು ಗೋಚರಿಸುವುದಿಲ್ಲ. ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ನಂತಹ ರಾಜ್ಯಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಹಲವು ಪ್ರದೇಶಗಳಲ್ಲಿ ತೀವ್ರವಾಗಿದೆ. ಮತ್ತೊಂದೆಡೆ ಕರ್ನಾಟಕ, ಮಹಾರಾಷ್ಟ್ರ ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ವೈದ್ಯಕೀಯ ವೃತ್ತಿಪರರ ಲಭ್ಯತೆ ತುಸು ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ದೇಶದ ಯಾವುದೇ ಭಾಗದಲ್ಲಿ ತಮ್ಮ ಅರ್ಹತೆಗೆ ಅನುಗುಣವಾಗಿ ಸೇವೆ ಸಲ್ಲಿಸಲು ಸಾಧ್ಯವಾದರೆ, ಅಗತ್ಯವಿರುವ ಪ್ರದೇಶಗಳಿಗೆ ವೈದ್ಯಕೀಯ ಸಿಬ್ಬಂದಿ ತಲುಪುವ ಅವಕಾಶ ಹೆಚ್ಚಬಹುದು ಎಂಬ ನಿರೀಕ್ಷೆಯಿದೆ.
ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸಸ್ (NIMHANS) ಮತ್ತು ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ಸೇರಿದಂತೆ ಹಲವು ಪ್ರಮುಖ ವೈದ್ಯಕೀಯ ಸಂಸ್ಥೆಗಳು ರಾಜ್ಯದಲ್ಲಿವೆ. ಅಂತಾರಾಜ್ಯ ಲೈಸೆನ್ಸ್ ಪೋರ್ಟಬಿಲಿಟಿ ಜಾರಿಗೆ ಬಂದರೆ, ದೇಶದ ವಿವಿಧ ಭಾಗಗಳಿಂದ ತಜ್ಞ ವೈದ್ಯರನ್ನು ಕರ್ನಾಟಕಕ್ಕೆ ಸುಲಭವಾಗಿ ಆಕರ್ಷಿಸಲು ಸಾಧ್ಯವಾಗಬಹುದು. ಅದೇ ರೀತಿ ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು ದೇಶದ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಲು ಎದುರಾಗುವ ನೋಂದಣಿ ಅಡೆತಡೆಗಳೂ ಕಡಿಮೆಯಾಗಬಹುದು. ಇದನ್ನು ಜಾರಿಗೆ ಸವಾಲುಗಳೂ ಇದ್ದರೂ ದೇಶದ ಪ್ರಮುಖ ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾಗಿರುವ ಕರ್ನಾಟಕಕ್ಕೆ ಈ ಪ್ರಸ್ತಾವನೆ ವಿಶೇಷ ಮಹತ್ವ ಹೊಂದಿದೆ.
ನೀತಿ ಆಯೋಗದ ಶಿಫಾರಸು ಕೇವಲ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಪ್ರಸ್ತಾವನೆಯಲ್ಲ. ದೇಶದ ಯಾವ ಭಾಗದಲ್ಲಿ ವೈದ್ಯರ ಅಗತ್ಯವಿದೆಯೋ, ಅಲ್ಲಿ ಅರ್ಹ ಆರೋಗ್ಯ ವೃತ್ತಿಪರರು ಸುಲಭವಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ದೊಡ್ಡ ಮಟ್ಟದ ಸುಧಾರಣೆಯ ಪ್ರಸ್ತಾವನೆಯಾಗಿದೆ.ರಾಜ್ಯ ವೈದ್ಯಕೀಯ ಮಂಡಳಿಗಳು ತಮ್ಮ ನಿಯಂತ್ರಣಾಧಿಕಾರ ಮತ್ತು ಆಡಳಿತಾತ್ಮಕ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವ ಬಗ್ಗೆ ಹಲವು ವರ್ಷಗಳಿಂದ ಒತ್ತು ನೀಡುತ್ತಿವೆ. ನೋಂದಣಿ ಶುಲ್ಕ ಮತ್ತು ವೃತ್ತಿಪರ ನಿಯಂತ್ರಣವೂ ರಾಜ್ಯ ಮಂಡಳಿಗಳ ಪ್ರಮುಖ ಜವಾಬ್ದಾರಿಗಳಾಗಿವೆ.
ಸ್ವಯಂಚಾಲಿತ ಲೈಸೆನ್ಸ್ ಪೋರ್ಟಬಿಲಿಟಿ ಜಾರಿಗೆ ಬಂದರೆ ವೈದ್ಯರ ಅರ್ಹತೆ, ನೋಂದಣಿ ಸ್ಥಿತಿ ಮತ್ತು ವೃತ್ತಿಪರ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವ ವ್ಯವಸ್ಥೆ ಇರಬೇಕು ಎಂಬುದು ಮತ್ತೊಂದು ಪ್ರಮುಖ ಪ್ರಶ್ನೆಯಾಗಿದೆ. ಗುಣಮಟ್ಟದ ನಿಯಂತ್ರಣಕ್ಕೆ ಯಾವುದೇ ಧಕ್ಕೆಯಾಗದಂತೆ ರಾಷ್ಟ್ರೀಯ ಮಟ್ಟದ ಪರಿಶೀಲನಾ ವ್ಯವಸ್ಥೆ ರೂಪಿಸುವ ಅಗತ್ಯವೂ ಇದೆ.ಈ ಯೋಜನೆ ಜಾರಿಗೆ ಬಂದರೆ ಆರೋಗ್ಯ ಸೇವೆಯನ್ನು ದೇಶದಾದ್ಯಂತ ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳುವ ರಾಷ್ಟ್ರೀಯ ವ್ಯವಸ್ಥೆಯತ್ತ ಸಾಗಲು ಒಂದು ಪ್ರಮುಖ ಹೆಜ್ಜೆಯಾಗಬಹುದು.

